ಬೆಂಬಲಿಗರು

ಸೋಮವಾರ, ಜನವರಿ 22, 2024

 


ಖ್ಯಾತ ಮಲಯಾಳಿ  ಲೇಖಕ ದಿ ಎಸ್ ಕೆ ಪೊಟ್ಟೆಕ್ಕಾಟ್ ಅವರ ಬಗ್ಗೆ ಹಿಂದೆ ಬರೆದಿದ್ದೆ . ಅವರ ಮ್ಯಾಗ್ನಮ್ ಓಪಸ್ ಎನ್ನ ಬಹುದಾದ ಒರು ದೇಶತ್ತಿನಂದೆ ಕಥಾ ಮಿತ್ರರಾದ ಡಾ ಅಶೋಕ್ ಕುಮಾರ್ ಮತ್ತು ದಿ ಕೆ ಕೆ ನಾಯರ್ ಒಂದು ಊರಿನ ಕತೆ ಎಂದು ಅನುವಾದಿಸಿದ್ದರು . ಇಂಗ್ಲಿಷ್ ನಲ್ಲಿ ಟೇಲ್ಸ್ ಒಫ್ ಅತಿರಾನಿಪಾದಮ್ ಎಂಬ ಶೀರ್ಷಿಕೆಯಲ್ಲಿ  ಚೆನ್ನಾಗಿ ಬಂದಿದೆ .ದುರದೃಷ್ಟ ವಶಾತ್ ಇವುಗಳ ಪ್ರತಿಗಳು ಈಗ ಲಭ್ಯವಿಲ್ಲ . ಅವರ ಪ್ರಸಿದ್ಧ ಪ್ರವಾಸ ಕಥನಗಳು ಅನುವಾದ ಗೊಳ್ಳ  ಬೇಕಾಗಿದೆ . 

ಹೀಗೆ ಜಾಲಾಡುತ್ತಿರುವಾಗ ಕಲ್ಲಿಕೋಟೆ ಲಿಪಿ ಪ್ರಕಾಶನದವರು ಡಾ ಪಿ ಪರಮೇಶ್ವರನ್ ಅವರು ಅನುವಾದಿಸಿದ ಸಣ್ಣ ಕತೆಗಳ ಸಂಕಲನ ನೈಟ್ ಕ್ವೀನ್ (ರಾತ್ರಿ ರಾಣಿ )ಅಂಡ್ ಅದರ್ ಸ್ಟೋರೀಸ್ ಎಂಬ ಕೃತಿ ಲಭ್ಯವಿದೆ ಎಂದು ತಿಳಿದು ತರಿಸಿ ಓದಿ ಸಂತೋಷ ಪಟ್ಟಿದ್ದೇನೆ ..ಇಲ್ಲಿಯ ಕತೆಗಳು ಕೇರಳ ,ಕಾಶ್ಮೀರ ,ಸ್ವಿಜರ್ ಲ್ಯಾಂಡ್ ,ಉಗಾಂಡಾ ,ರೊಡೇಷಿಯಾ ಮತ್ತು ಝೆಕೋ ಸ್ಲಾವಾಕಿಯ ಇತ್ಯಾದಿ ದೇಶಗಳ ಹಿನ್ನಲೆಯಲ್ಲಿ ಇವೆ . ಅವರ ಪ್ರವಾಸ ಅನುಭವ ಎದ್ದು ಕಾಣುತ್ತದೆ .ಒಂದು ರೀತಿಯಲ್ಲಿ ಮಾಸ್ತಿ ಯವರ ನಿರೂಪಣೆ ಹೋಲುತ್ತವೆ . ಒಂದೇ ವ್ಯತ್ಯಾಸ ಮಾಸ್ತಿಯವರು ಶೃಂಗಾರ ವರ್ಣನೆಯಲ್ಲಿ ಸ್ವಲ್ಪ ಮಡಿ ತೋರಿದರೆ ಇವರ ಬರವಣಿಗೆಯಲ್ಲಿ ಅಲ್ಲೂ ಸಹಜತೆ ಎದ್ದು ಕಾಣುತ್ತದೆ . ಒಟ್ಟಿನಲ್ಲಿ ಬಹಳ ದಿನಗಳ ನಂತರ ಒಂದು ಒಳ್ಳೆಯ ಕಥಾ ಸಂಕಲನ ಓದಿ ಸಂತೋಷ ಪಟ್ಟೆ 

ಬುಧವಾರ, ಜನವರಿ 17, 2024

                     



 ಕೇರಳ ಲಿಟರೇಚರ್ ಫೆಸ್ಟಿವಲ್ ನ  ನಾನು ಮೆಚ್ಚಿದ ಇನ್ನೊಂದು ಗೋಷ್ಠಿ ಶ್ರೀ ಸಂತೋಷ್ ಜಾರ್ಜ್ ಕುಳಂಗರ ಅವರದ್ದು . ಈ ವ್ಯಕ್ತಿ ಒಂದು ವಿಸ್ಮಯ . ಚರಿತ್ರೆ ಮತ್ತು ಪ್ರವಾಸ ಸಂಬಂದಿಸಿದ ಮಲಯಾಳಂ  ಟಿ ವಿ ಚಾನೆಲ್ ' ಸಫಾರಿ 'ಯನ್ನು ದಶಕಗಳಿಂದ ,ಯಾವುದೇ ಬಾಹ್ಯ ಜಾಹಿರಾತು ಇಲ್ಲದೆ ನಡೆಸಿ ಕೊಂಡು ಬರುತ್ತಿದ್ದಾರೆ .ತಾನು ಸ್ವಯಂ ೧೩೦ ಕ್ಕೂ ಅಧಿಕ ದೇಶಗಳ ಪ್ರವಾಸ ಕೈಗೊಂಡು ಅದನ್ನು ದಾಖಲಿಸಿ ಸಂಚಾರಂ ಎಂಬ ಶೀರ್ಷಿಕೆಯಲ್ಲಿ ಪ್ರಸಾರ ಮಾಡಿದ್ದಾರೆ . ಅವುಗಳ ಡಿವಿಡಿ , ಯು ಎಸ್ ಬಿ ಗಳನ್ನು  ತಯಾರಿಸಿ ಆಸಕ್ತರಿಗೆ  ಲಭ್ಯ ಮಾಡಿದ್ದಾರೆ . ನಾನು ಹಲವು ಎಪಿಸೋಡ್ ಗಳನ್ನು ನೋಡಿ ಆನಂದ ಪಟ್ಟಿದ್ದೇನೆ . ಅವರೊಡನೆ ನಾವೂ ದೇಶ ಸಂಚಾರ ಮಾಡಿದ ಅನುಭವ ಆಗುತ್ತದೆ . 

ತಮಗೆ ಸ್ಪೂರ್ತಿ  ಪ್ರವಾಸ ಸಾಹಿತ್ಯ ,ಕಾದಂಬರಿ ,ಸಣ್ಣಕತೆ ಇತ್ಯಾದಿಗಳಿಂದ ಪ್ರಸಿದ್ಧ ರಾಗಿ ,ಸಂಸದರೂ ಆಗಿದ್ದ ಜ್ಞಾನ ಪೀಠ ,ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಪ್ರಸಿದ್ಧ ಸಾಹಿತಿ ಕಲ್ಲಿಕೋಟೆ ಯವರೇ ಆದ ಶ್ರೀ ಎಸ್ ಕೆ ಪೊಟ್ಟೆಕ್ಕಾಟ್ ಎಂದರು . ಪೊಟ್ಟೆಕ್ಕಾಟ್ ಅವರ ಪ್ರವಾಸ ಸಾಹಿತ್ಯ ಬಹುಶಃ ಬೇರೆ ಭಾಷೆಗಳಿಗೆ ಅನುವಾದ ಆಗಿರದಿದ್ದರೂ ಅನುವಾದ ಆಗಿರುವ ಸಣ್ಣ ಕತೆ ಕಾದಂಬರಿಗಳಲ್ಲಿ ಅವರಲ್ಲಿರುವ ಪ್ರವಾಸಿ ಅಲ್ಲಲ್ಲಿ ಪ್ರಕಟವಾಗುವುದನ್ನು ಕಂಡಿದ್ದೇನೆ 

ಗೋಷ್ಠಿಯಲ್ಲಿ ಒಂದು ವಿಷಯ ಉಲ್ಲೇಖಿಸಿದರು ..ನಮ್ಮಲ್ಲಿ ಶೈಕ್ಷಣಿಕ ಪ್ರವಾಸ ಎಂದರೆ ಗಟ್ಟಿಯಾಗಿ ಡಿಶುಮ್ ಡಿಶುಮ್ ಸಂಗೀತ ಹಾಕಿಕೊಂಡು ಬಸ್ಸಿನಲ್ಲಿ ಹೋಗಿ  ಅಲ್ಲಿ ಇಲ್ಲಿ ಅಡ್ಡಾಡಿ ಬರುವದು .ಆದರೆ ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳು ತಿಂಗಳು ಗಟ್ಟಲೆ ಹೊರ ನಾಡುಗಳಿಗೆ ತಾವೇ ಹೋಗಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವುದರ ಜತೆ   ಅಲ್ಲಿಯ ಜೀವನ ಕ್ರಮ ,ಸಂಸ್ಕೃತಿ ಮತ್ತು ಚರಿತ್ರೆ ಯ ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಪಠ್ಯ ಕ್ರಮದ ಒಂದು ಭಾಗ . (ಇಂಗ್ಲೆಂಡ್ ನಲ್ಲಿ ಕಲಿಯುವ ನನ್ನ ಅಣ್ಣನ ಮೊಮ್ಮಗಳು ಶ್ರೀ ಲಂಕಾ  ದೇಶದಲ್ಲಿ ಪ್ರವಾಸಿ ವಾಸ್ತವ್ಯ ಮಾಡಿದ್ದಳು ). ಇದರಿಂದ ವಿದ್ಯಾರ್ಥಿಗಳ ದೃಷ್ಟಿ ಕೋನ ವಿಶಾಲವಾಗುವುದು .

ನಮ್ಮ ದೇಶದಲ್ಲಿ ವಿದ್ಯಾಭ್ಯಾಸ  ದ  ಜತೆಗೆ ನಾಗರೀಕ ಪ್ರಜ್ಞೆ ಯ ಮೈಗೂಡಿಸುವಿಕೆ ಇಲ್ಲದಿರುವುದು ವಿಷಾದನೀಯ ಎಂದರು . 

Human beings need not apply

 ಹೋದ ವಾರ ಕಲ್ಲಿಕೋಟೆ ಯಲ್ಲಿ ನಡೆದ ಕೇರಳ ಲಿಟೆರರಿ ಫೆಷ್ಟಿವಲ್ ನಲ್ಲಿ ನಡೆದ ಗೋಷ್ಟಿಗಳನ್ನು  ಯು ಟ್ಯೂಬ್ ನಲ್ಲಿ ನೋಡುತ್ತಿದ್ದೆ .ಒಂದು ಗೋಷ್ಟಿಯ ಶೀರ್ಷಿಕೆ ನನ್ನ ಗಮನ ಸೆಳೆಯಿತು .ಹ್ಯೂಮನ್ ಬೀಯಿಂಗ್ಸ ನೀಡ್ ನೋಟ್  ಎಪ್ಲಯ್(Human beings need not apply )ಎಂದಾಗಿತ್ತು ಅದು . ಮನುಷ್ಯರು ಅರ್ಜಿ ಹಾಕುವುದು ಬೇಡ ಎಂಬ ಅರ್ಥ . 

ಕೆಲಸಕ್ಕೆ ಅರ್ಜಿ ಕರೆಯುವಾಗ ಇಂತಹ ಷರತ್ತುಗಳು ಇರುವುದು ಸಹಜ  ಮೂವತ್ತು ವಯಸ್ಸಿನ ಮೇಲಿನವರು ಬೇಡ ,ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಿ ಇತ್ಯಾದಿ . ಆದರೆ ಇಲ್ಲಿ ಮನುಷ್ಯರೇ ಬೇಡ ಎಂದರೆ , ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಕು ಎಂಬ ಅರ್ಥ . ಒಂದು ರೀತಿಯಲ್ಲಿ ಈಗಿನ ಕಂಪ್ಯೂಟರ್ ಗಳೂ ಭಾಗಶಃ ಕೃತಕ ಬುದ್ದಿಜೀವಿ ಗಳೇ .ಆದರೆ ಅವಕ್ಕೆ ದಾರಿ ತೋರಲು ಮನುಷ್ಯ ಮೆದುಳಿನ ಅವಶ್ಯಕತೆ ಇತ್ತು . 

ಕಂಪ್ಯೂಟರ್ ಆಧರಿತ  ಸಾಫ್ಟ್ ವೆರ್  ಹಲವು ಉದ್ಯೋಗಗಳನ್ನು ಸೃಷ್ಟಿಸಿತು . ಜತೆಗೆ ಹಲವು ಉದ್ಯೋಗಗಳು ಅಪ್ರಸ್ತುತ ವಾದುವು . ನಮ್ಮ ದೇಶದಲ್ಲಿ ಇದು ಒಂದು ಕಡೆ  ಆರ್ಥಿಕ  ಸಮಾನತೆ (equalizer )ತರುವ ಮಾರ್ಗವಾದರೆ ಇನ್ನೊಂದೆಡೆ ಸಾಂಪ್ರದಾಯಿಕ ಉದ್ಯೋಗ ಗಳನ್ನು ಅವಲಂಬಿಸಿದವರು ಮತ್ತು ಇವರ ನಡುವೆ ದೊಡ್ಡ ಕಂದರ ನಿರ್ಮಾಣ ವಾಯಿತು . ಮಾರುಕಟ್ಟೆಯಲ್ಲಿ ಹಣ ಚಲಾವಣೆ ದಿಢೀರ್ ಹೆಚ್ಚು ಆಯಿತು . ನಗರಗಳಲ್ಲಿ ಮಾಲ್ ಸಂಸ್ಕೃತಿ ಬೆಳೆಯಿತು, ನಿವೇಶನ ಬೆಲೆ ಗಗನಕ್ಕೆ ಏರಿತು  .;ಕೌಟುಂಬಿಕ ಸಾಮಾಜಿಕ ಬಂಧಗಳು ಶಿಥಿಲ ವಾದುವು . 

ಇದೇ ವೈಜ್ಞಾನಿಕ ಬೆಳವಣಿಗೆ ಇಂದು ಕೃತಕ ಬುದ್ದಿ ಮತ್ತೆಯ ರೂಪದಲ್ಲಿ ಬಂದಿದೆ .ಹಲವರ ಉದ್ಯೋಗ ಕಸಿಯುವ ,ಹೊಸ ಮಾನವ ಉದ್ಯೋಗ ಸೃಷ್ಟಿ ಕುಂಠಿತ ಗೊಳಿಸುವ ಇದು ಒಂದು ಭಸ್ಮಾಸುರ ನಾಗಿ ಕಾಡುವುದೇ ?ನಮ್ಮ ಯುವ ಪೀಳಿಗೆಯ ಮೇಲೆ ಏನು ಪರಿಣಾಮ ಬೀರೀತು ?ದಾವೋಸ್ ನಲ್ಲಿ ನಡೆಯುವ ವಿಶ್ವ ವಾಣಿಜ್ಯ  ಕೂಟದಲ್ಲಿ ಕೂಡಾ ಈ ವರ್ಷ ಈ ವಿಷಯದ ಮೇಲೆ ಗಂಭೀರ ಚರ್ಚೆ ನಡೆಯಲಿದೆ

ಬುಧವಾರ, ಜನವರಿ 3, 2024

 ಬಹಳ ರೋಚಕವಾದ ಇನ್ನೊಂದು ಆತ್ಮ ಕತೆ ಓದಿ ಮುಗಿಸಿದ್ದೇನೆ .ಡಾ ಲಿಂಡಿ ರಾಜನ್ ಕಾರ್ಟ್ನರ್ ಅವರ ತ್ರೀ ಕಂಟ್ರೀಸ್ ತ್ರೀ ಲೈವ್ಸ್ (ಮೂರು ದೇಶ ಮೂರು ಜೇವಿತ ).ತಾತ ತೂತು ಕುಡಿ ಮೂಲದವರು .ಸ್ವಾತಂತ್ರ್ಯ ಪೂರ್ವದ ಬರ್ಮಾ ದೇಶದಲ್ಲಿ ವೈದ್ಯ ವೃತ್ತಿ .ಲೇಖಕಿಯ ಜನನ ಅಲ್ಲಿಯೇ .ಮೊದಲ ಶಾಲೆ ಕೂಡಾ . ಎರಡನೇ ಮಹಾಯುದ್ದದ ಸಮಯ . ಧಾಳಿಯಿಂದ ತಪ್ಪಿಸಿ ಕೊಳ್ಳಲು ಆಗಾಗ ಊರು ಬದಲಾವಣೆ . ಕೊನೆಗೆ ಬೇಸತ್ತು ಮದ್ರಾಸ್ ನಗರಕ್ಕೆ ಆಗಮಿಸಿ ಅಲ್ಲಿಯೇ ವಾಸ . ಅವರ ಅಜ್ಜನ ಹೆಸರಿನಲ್ಲಿ ಒಂದು ರಸ್ತೆ ಕೂಡಾ ಚೆನ್ನೈ ಟಿ ನಗರ ದಲ್ಲಿ ಇರಬೇಕು . ಬ್ರಾಹ್ಮಣರೇ ಅಧಿಕ ಸಂಖ್ಯೆಯಲ್ಲಿ ಇದ್ದ ಪ್ರದೇಶ . ಪ್ರಾಥಮಿಕ ಶಿಕ್ಷಣ ತರುವಾಯ ಬೆಂಗಳೂರಿನ ಬಿಷಪ್ ಕಾಟನ್ ಹೈ ಸ್ಕೂಲ್ . ಅಂದಿನ ಬೆಂಗಳೂರಿನ ಚಿತ್ರಣ ಇದೆ . ಆಗೆಲ್ಲಾ ಮಿಷನ್ ಶಾಲೆಗಳಲ್ಲಿ ವಿದೇಶಿ ಅಧ್ಯಾಪಕರು ಅಧಿಕ .

ಕಾಲೇಜು ವಿದ್ಯಾಭ್ಯಾಸಕ್ಕೆ ಲಕ್ನೋ ನಗರದ ಒಂದು ಮಿಷನ್ ಕಾಲೇಜು . ಈ ಸಂಸ್ಥೆಗಳು ಎಲ್ಲಾ ಅಮ್ಮನ ಆಯ್ಕೆ .ಮಗಳಿಗೆ ಅತ್ಯತ್ತಮ ಶಿಕ್ಷಣ ದೊರೆಯಲಿ ಎಂಬ ಹಾರೈಕೆಯಲ್ಲಿ .ಆ ಕಾಲದ ಗ್ರಾಂಡ್ ಟ್ರಂಕ್ ಎಕ್ಸ್ಪ್ರೆಸ್ ಪ್ರಯಾಣದ ವಿವರ ಚೆನ್ನಾಗಿದೆ . ಆ ಕಾಲೇಜು ಎಲ್ಲಾ ವಿಧದಲ್ಲಿ ಚೆನ್ನಾಗಿತ್ತು .ಆದರೆ ಒಂದು ಎಡವಟ್ಟು .ಹಿಂದಿ ಕಡ್ಡಾಯ . ಮೊದಲನೇ ಸಲ ಹಿಂದಿಯಲ್ಲಿ ಅನುತ್ತೀರ್ಣ ಆದ ಕಾರಣ ಪ್ರಸಿದ್ಧ ವೆಲ್ಲೂರ್ ಸಿ ಎಂ ಸಿ ಮೆಡಿಕಲ್ ಕಾಲೇಜು ಅಡ್ಮಿಶನ್ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ .ಛಲ ಬಿಡದೆ ಪುನಃ ಕುಳಿತು ಉತ್ತೀರ್ಣ . ವೆಲ್ಲೂರ್ ಕಾಲೇಜಿಗೆ ಸೇರ್ಪಡೆ .


ವೆಲ್ಲೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಜೀವನ .,ಅಲ್ಲಿಯ ಶಿಸ್ತು , ಕಾಯಕ ಸಂಸ್ಕೃತಿ ಮತ್ತು ಅಧ್ಯಾಪಕ ವೃಂದದ ಸೇವಾ ಬದ್ಧತೆ ಯ ವಿವರ ಇದೆ . ಅಲ್ಲಿಯೇ ಸೀನಿಯರ್ ಆಗಿದ್ದ ಮೈಕೆಲ್ ಎಂಬ ಆಂಗ್ಲೋ ಇಂಡಿಯನ್ ಜತೆ ಮದುವೆ .ಮತ್ತು ಇಂಗ್ಲೆಂಡ್ ಗೆ ಪ್ರಯಾಣ .ಅಲ್ಲಿ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ .ವರ್ಣ ಭೇಧ ನೀತಿಯಿಂದ ಬೇಸರ . ಮೈಕೆಲ್ ಎಫ್ ಆರ್ ಸಿ ಎಸ್ ಪದವಿ ಗಳಿಸಿದ ಒಡನೆ ಖಾಯಂ ನೆಲಸುವ ಉದ್ದೇಶದಿಂದ ಭಾರತಕ್ಕೆ ಆಗಮಿಸಿ ಕರ್ನಾಟಕ ಕೋಲಾರದಲ್ಲಿ ಮಿಷನ್ ಆಸ್ಪತ್ರೆಯಲ್ಲಿ ಕೆಲಸ . ಆದರೆ ತನ್ನ ಜ್ಞಾನದ ಸದುಪಯೋಗ ಮಾಡುವ ವಾತಾವರಣ ಇಲ್ಲದೇ ಬೇಸತ್ತು ಇಂಗ್ಲೆಂಡ್ ಮರುಪಯಣ . ಅಲ್ಲಿ ಹಲವು ಆಸ್ಪತ್ರೆಗಳಲ್ಲಿ ಕೆಲಸ . ನಡುವೆ ಪುತ್ರಿ ಕಿರಣಳ ಜನನ . ಇನ್ನೇನು ಮೈಕೆಲ್ ಗೆ ತಜ್ಞ ವೈದ್ಯ ಉಪಾಧಿ ಸಿಕ್ಕು ,ಮನೆ ಮಾಡಿ ಸೆಟ್ಲ್ ಆದಿವಿ ಎಂದು ಕೊಳ್ಳುವಾಗ ಹೃದಯಾಘಾತದಿಂದ ಆತ ಅಸ್ವಸ್ಥ . ಮುಂದೆ ಪೂರ್ಣ ಚೇತರಿಸಿ ಕೊಳ್ಳಲೇ ಇಲ್ಲ . ತಾನು ಮನಸಿಲ್ಲದ ಮನಸಿನಲ್ಲಿ ಗಂಡನ ಪ್ರೋತ್ಸಾಹದಿಂದ ರಕ್ತ ಶಾಸ್ತ್ರ (ಹಿಮಟೋಲೊಜಿ )ಯಲ್ಲಿ ರಾಯಲ್ ಕಾಲೇಜು ಫೆಲೋಶಿಪ್ ಗಳಿಸಿ ಜೇವನ ಮುಂದುವರಿಕೆ ..ಮುಂದೆ ಅಲ್ಲಿ ಪರಿಚಯ ಆದ ಇತಿಹಾಸಜ್ಞ ಅಲನ್ ಪೈಪರ್ ಜತೆ ಪುನರ್ವಿವಾಹ .

ಲಿಂಡಿ ಅವರ ಸಹೋದರಿ ವೆಲ್ಲೂರು ಮತ್ತು ಅಮೇರಿಕಾ ದಲ್ಲಿ ನರ್ಸಿಂಗ್ ಕಲಿತು ,ಹೃದ್ರೋಗ ತಜ್ಞರನ್ನು ಮದುವೆಯಾಗಿ ಅಲ್ಲಿಯೇ ಸೇವೆ .

ಅಲನ್ ಪೈಪರ್ ಜತೆ ಚೈನಾ ಯಾತ್ರೆಯಲ್ಲಿ ,ತಾನು ಅಲ್ಲಿಯ ನೈರ್ಮಲ್ಯ ,ಶಿಸ್ತು ನೋಡಿ ನಮ್ಮ ಭಾರತದಲ್ಲಿ ಇವುಗಳು ಯಾಕೆ ಇಲ್ಲಾ ಎಂದು ಕೇಳಿದಾಗ ಅಲನ್ ಅಂದರಂತೆ 'ಅಲ್ಲಿ ಒಂದು ಆತ್ಮ ಇದೆ(ಇಲ್ಲಿ ಇಲ್ಲದ ) "



ಭಾನುವಾರ, ಡಿಸೆಂಬರ್ 31, 2023

 


  ಬಿ ಎ  ಸಾಲೆಟೋರ್ ಎಂದು ಪ್ರಸಿದ್ಧರಾದ   ಡಾ ಭಾಸ್ಕರ ಆನಂದ ಸಾಲೆತ್ತೂರು  ೧೯೦೨ ರಲ್ಲಿ ವಿಟ್ಲ ಸಮೀಪ ಸಾಲೆತ್ತೂರಿನಲ್ಲಿ ಜನಿಸಿದರು ,ಮಂಗಳೂರು ,ಚೆನ್ನೈ ಮತ್ತು ಮುಂಬೈ ಯಲ್ಲಿ ವಿದ್ಯಾಭ್ಯಾಸ "ವಿಜಯನಗರ ಸಾಮ್ರಾಜ್ಯದಲ್ಲಿನ ಸಾಮಾಜಿಕ ಮತ್ತು  ರಾಜಕೀಯ ಜೀವನ "ಎಂಬ ಪ್ರಭುದ್ದ  ಅಧ್ಯಯನ ಕ್ಕೆ ಲಂಡನ್ ವಿಶ್ವ ವಿದ್ಯಾಲಯ ದಿಂದ  ಇತಿಹಾಸದಲ್ಲಿ ಡಾಕ್ಟರೇಟ್ . .ವಿಜಯನಗರ ಅರಸರು ಮೂಲತಃ ಕನ್ನಡಿಗರು ಎಂದು ಸಾಧಿಸಿದ ಹೆಗ್ಗಳಿಕೆ .ಮುಂದೆ ಜರ್ಮನ್ ವಿಶ್ವವಿದ್ಯಾಲಯ ಒಂದರಿಂದ ಪೊಲಿಟಿಕಲ್ ಸೈನ್ಸ್ ನಲ್ಲಿ ಎರಡನೇ ಡಾಕ್ಟರೇಟ್ ,
ವೃತ್ತಿ ಜೀವನ ವನ್ನು ಮುಂಬೈಯ ಪರ್ಷು ರಾಮ್ ಬಾವೂ ಕಾಲೇಜು ನಲ್ಲಿ ಆರಂಭಿಸಿ ,ಅಹಮದಾ ಬಾದ್ ವಿಶ್ವ ವಿದ್ಯಾಲಯ  ಅಧ್ಯಾಪನ .:ನಂತರ ಬಾಂಬೆ ವಿದ್ಯಾ ಇಲಾಖೆ (ಇದರಲ್ಲಿ ಡಿ ಸಿ ಪಾವಟೆ ಕೂಡಾ ಸೇವೆ ಸಲ್ಲಿಸಿದ್ದರು ),ಮುಂದೆ ರಾಷ್ಟ್ರೀಯ ಪತ್ರಾಗಾರ ದ ನಿರ್ದೇಶಕ . ೧೯೬೦ ರಲ್ಲಿ ನಿವೃತ್ತಿ ನಂತರ ಕರ್ನಾಟಕ ವಿಶ್ವ ವಿದ್ಯಾಲಯ ಇತಿಹಾಸ ವಿಭಾಗ   ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸ್ಸರ್ ಮತ್ತು ಮುಖ್ಯಸ್ಥ . ಮುಂದೆ ಅಲ್ಲಿಯೇ ಕನ್ನಡ ಸಂಶೋಧನಾ ಕೇಂದ್ರದ ಮುಖ್ಯಸ್ಥ . ಪ್ರಸಿದ್ಧ ಇತಿಹಾಸಜ್ಞ ರಾದ ಪ್ರೊ ಜಿ ಎಸ್ ದೀಕ್ಷಿತ್ ಮತ್ತು ಸೂರ್ಯನಾಥ ಕಾಮತ್ ಇವರ ಗರಡಿಯಲ್ಲಿ ಬೆಳಗಿದ ಪ್ರತಿಭೆಗಳು . 
೧೯೬೩ ರಲ್ಲಿ ತಮ್ಮ ೬೧ ನೇ ವಯಸಿನಲ್ಲಿ ನಿಧನರಾದರು . 
 ಹಿಂದಿನ ಶತಮಾನಗಳ ವಿದೇಶಿಯರು ,ದೇಶಪ್ರೇಮ ಇತ್ಯಾದಿ ಬಗ್ಗೆ ಚರ್ಚೆಯಾಗುತ್ತಿರುವ ಈ ದಿನಗಳಲ್ಲಿ ಅವರ  ಅಭಿಪ್ರಾಯ ಗಮನಾರ್ಹ . 
"ಚರಿತ್ರೆಯಲ್ಲಿ ನಾವು ಇಂದಿನ ವಿದ್ಯಮಾನಗಳಿಂದ ಪೂರ್ವಾಗ್ರಹ  ಪೀಡಿತರಾಗಿ ವಿದೇಶಿ ಎಂಬುದರ ವ್ಯಾಖ್ಯೆ ಮಾಡುತ್ತಿದ್ದೇವೆ . ಶತ ಶತಮಾನ ಗಳಿಂದ ಬಾಹ್ಯ   ಪ್ರಭಾವಗಳಿಗೆ   ನಮ್ಮ ಇತಿಹಾಸ  ಒಳಗಾಗಿದೆ .ಇದರಿಂದ ಸಾಮಾಜಿಕ ಪರಿಶುದ್ಧತೆ ಎಂಬುದು ಒಂದು ಮಿಥ್ಯೆ ಮತ್ತು ನಮ್ಮ ಅಧ್ಯಯನದಲ್ಲಿ ಅದಕ್ಕೆ ಸ್ಥಾನ ವಿಲ್ಲ, ಅಲ್ಲದೆ ನಮ್ಮ ಸಂಸ್ಕೃತಿಯಲ್ಲಿ ನೂರಕ್ಕೆ ನೂರು ಒಂದು ವಿಭಾಗದಿಂದ ಬಂದುದು ಎಂದು ಇಲ್ಲ ,ಆದುದರಿಂದ ನಮ್ಮ ಹಿರಿಯರು ಎಲ್ಲರಿಂದ ಮತ್ತು ಎಲ್ಲದರಿಂದ ಒಳ್ಳೆಯದನ್ನು ತೆರೆದ ಮನಸಿನಲ್ಲಿ ಸ್ವೀಕರಿಸಿದಂತೆ ನಾವೂ ಹೃದಯ ವೈಶಾಲ್ಯದಿಂದ  ಸಹನೆ ಮತ್ತು ಸಹ ಬಾಳ್ವೆಯನ್ನು ನಮ್ಮದಾಗಿರಿಸಿ ಕೊಳ್ಳುವುದು ಇಂದಿನ ಅವಶ್ಯಕತೆ "



ಬುಧವಾರ, ಡಿಸೆಂಬರ್ 27, 2023

ಪುಣ್ಯ ಪುರುಷರ ದೇವ ಕಾರ್ಯ



 ಹೋದ ಭಾನುವಾರ  ಮುಂಜಾನೆ ಪುತ್ತೂರು   ರಾಮಕೃಷ್ಣ ಸೇವಾಶ್ರಮ ದ ವಾರ್ಷಿಕೋತ್ಸವ ದಲ್ಲಿ ಭಾಗಿಯಾಗುವ ಸುಯೋಗ ದೊರಕಿತ್ತು . ಈ ಸಂಸ್ಥೆಯ ಬಗೆಗೆ ಕೇಳಿ ಪಟ್ಟಿದ್ದೆ . ಪುತ್ತೂರು ಬಸ್ ನಿಲ್ದಾಣ ದ ತೊಟ್ಟು ಸನಿಹದಲ್ಲಿ ಈಶಾನ್ಯಕ್ಕೆ ಇದೆ .ನೂರಕ್ಕೆ ನೂರು ಸೇವಾ ಸಂಸ್ಥೆ .ಈಗ ಅಧ್ಯಕ್ಷರಾಗಿ ಹಿರಿಯ ರಾದ ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ.ಉಪಾಧ್ಯಕ್ಷ ಡಾ ಗೌರಿ ಪೈ ಮತ್ತು ಕಾರ್ಯದರ್ಶಿ ಶ್ರೀ ಗುಣಪಾಲ ಜೈನ್  ಇದ್ದು ಅವರ ಸಹೃದಯಿ ಸದಸ್ಯರನ್ನು ಒಳಗೂಡಿದ ಕಾರ್ಯ ಕಾರಿ ಸಮಿತಿ . ಈ ಸಂಸ್ಥೆಯ ಇತಿಹಾಸ ಬಗ್ಗೆ ಶ್ರೀ ಗುಣಪಾಲ ಜೈನ್ ಅವರ ಪ್ರಸ್ತಾವಿಕ ಭಾಷಣ ಮತ್ತು ಶ್ರೀಮತಿ ವತ್ಸಲಾ ರಾಜ್ನಿ ಯವರ ವಾರ್ಷಿಕ ವರದಿಯಲ್ಲಿ ಮಾಹಿತಿ ಲಭಿಸಿತು .ಅದರ ಸಾರಾಂಶ ಕೆಳಗೆ ಕೊಟ್ಟಿರುವೆನು .

ಕಾರ್ಮಿಕರ ಮಕ್ಕಳ ಸಂಕಟ ನೋಡಿ ಹುಟ್ಟಿತು :
1953ರಲ್ಲಿ ಪುತ್ತೂರಿನ ಎ ಸಿ  ಕೋರ್ಟಿನಲ್ಲಿ ಬೆಂಚ್ ಕ್ಲಕ್ ಆಗಿದ್ದ ಬಪ್ಪನಾಡು ಲಕ್ಷ್ಮಿನಾರಾಯಣ ರಾವ್. ರಾಯರು ಕಚೇರಿಗೆ ಹೋಗುವ ದಾರಿಯಲ್ಲಿ ರಸ್ತೆಗೆ ಡಾಮರು ಹಾಕುವ ಕಾರ್ಮಿಕರ ಇಬ್ಬರು ಮಕ್ಕಳು ಜಲ್ಲಿ ಮೇಲೆ ಮಲಗಿರುವುದನ್ನು ಕಂಡು ಮರುಗಿದರು. ಕೊಯಮುತ್ತೂರು ಮೂಲದ ದಂಪತಿಯ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕಿ ಸಲಹಿದ ಬಿ.ಎಲ್. ರಾಯರೇ ರಾಮಕೃಷ್ಣ ಸೇವಾ ಸಮಾಜದ ಸ್ಥಾಪಕರು. ಆಗಿನ ಹಿರಿಯ ನ್ಯಾಯವಾದಿ ಎಂ. ಸದಾಶಿವ ರಾಯರು ಬಿ.ಎಲ್. ರಾಯರ ಜೊತೆ ಸೇರಿ ಸಮಾಜಕ್ಕೆ ವಿಶಿಷ್ಟ ರೂಪು ನೀಡಿದರು. ಸದಾಶಿವ ರಾಯರು ಸ್ಥಾಪಕಾಧ್ಯಕ್ಷರಾಗಿ ಮತ್ತಷ್ಟು ಅನಾಥ ಮಕ್ಕಳನ್ನು ಸಾಕಿದರು. ಇಬ್ಬರೂ ಸೇರಿ ಅಕ್ಕಿ, ತರಕಾರಿ, ಬೇಳೆಕಾಳುಗಳನ್ನು ದಾನಿಗಳಿಂದ ಸಂಗ್ರಹಿಸಿ ಮೊದಲ ಹಂತದಲ್ಲಿ ಒಂಬತ್ತು ಮಕ್ಕಳನ್ನು ಸಾಕಿದರೆ, ಸಂಸ್ಥೆಗೆ ತಾಯಿಯ ರೂಪದಲ್ಲಿ ಬಂದವರು ಮಂಜಕ್ಕೆ ಎಂಬವರು. 1957ರಲ್ಲಿ ಬಿ.ಎಲ್. ರಾಯರು ಆಶ್ರಮದ ಮಕ್ಕಳನ್ನು ಕೊಯ್ಲಕ್ಕೆ ಪಿಕ್ನಿಕ್‌ಗೆ ಕರೆದುಕೊಂಡು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟರು.

 55 ವರ್ಷಗಳ ಹಿಂದೆ ಉದಾತ್ತ ಆದರ್ಶಗಳನ್ನು ಇಟ್ಟುಕೊಂಡು ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ನೆರವಾಗಬಲ್ಲ ಹಾಗೂ ಅಗತ್ಯವಾಗಿದ್ದ ನಮ್ಮ ಒಟ್ಟು ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ಯೋಗ್ಯವಾದ ಮೌಲ್ಯಾಧಾರಿತ, ವಿದ್ಯಾಭ್ಯಾಸ, ಪೋಷಣೆ, ಆರೋಗ್ಯ ನೀಡಿ ಅವರನ್ನು ಯೋಗ್ಯ ಪ್ರಜೆಗಳನ್ನಾಗಿ ರೂಪಿಸಲು ಹಾಗೂ ನೆರವು ನೀಡಲು ಹುಟ್ಟಿಕೊಂಡ ಶ್ರೀ ರಾಮಕೃಷ್ಣ ಸೇವಾ ಸಮಾಜ’ ಮುಂದೆ ನಡೆದು ಬಂದಂತಹ ದಾರಿ ಸುಲಭದ್ದಾಗಿರಲಿಲ್ಲ. ಇದರ ಹಿಂದೆ ನೂರಾರು ಮಂದಿ ಸೇವಾ ಮನೋಭಾವದ ಹಿರಿಯರ ಶ್ರದ್ಧೆ, ನಿಷ್ಠೆ, ತ್ಯಾಗ ಮನೋಭಾವ ಇಲ್ಲಿ ತುಂಬಾ ಕೆಲಸ ಮಾಡಿದೆ. ಈ ಸಂಸ್ಥೆ ಸ್ಥಾಪಿಸಲು ಪ್ರಥಮದಲ್ಲಿ ತೊಡಗಿಸಿಕೊಂಡವರು ನಮ್ಮ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿ| ಎಂ. ಸದಾಶಿವ ರಾವ್ ಹಾಗೂ ದಿ| ಬಿ.ಎಲ್.ರಾವ್ ಇವರ ಕನಸಿನ ಕೂಸು ನಮ್ಮ ಈ ಸಮಾಜ ಆಗಿರುತ್ತದೆ. ನಂತರ ಇವರೊಂದಿಗೆ ಕೈಜೋಡಿಸಿ ದುಡಿದವರಲ್ಲಿ ಈಗ ನಮ್ಮೊಂದಿಗೆ ಇಲ್ಲದ ದಿ|ಪಿ. ವಿಠ್ಠಲ್ ಪೈ ಮತ್ತು ದಿ| ಎಂ. ಮಾಧವ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸ್ಮರಣಾರ್ಹ .ಆನಂದ ಆಶ್ರಮ ಸ್ಥಾಪಕಿ ಡಾ ಗೌರಿ ಪೈ ಈ ಸಂಸ್ಥೆಯಲ್ಲಿ ಕೂಡಾ ಕ್ರಿಯಾಶೀಲೆ . ಕೊಳತ್ತಾಯ ಅವರು ಇದನ್ನು ಉಲ್ಲೇಖ ಮಾಡಿ ಅವರ ಸೇವಾ ಮನೋಭಾವ ಮತ್ತು ಸಂಘಟನಾ ಚತುರತೆ ಕೊಂಡಾಡಿದರು.

 ಸಮಾಜವು ಆರ್ಥಿಕವಾಗಿ ತೀರಾ ದುರ್ಬಲರು ಹಾಗೂ ತಂದೆ/ತಾಯಿ ಇಲ್ಲದ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ರಕ್ಷಣೆ, ವಿದ್ಯೆ, ಊಟ-ಉಪಚಾರ, ವಸತಿ, ಉಡುಗೆ-ತೊಡುಗೆ, ಔಷಧಿ ಇತ್ಯಾದಿಗಳನ್ನು ಉಚಿತವಾಗಿ ನೀಡಿ ಇಂತಹ ಮಕ್ಕಳನ್ನು ನಾಗರಿಕ ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವಂತೆ ಹಾಗೂ ಮುಂದಕ್ಕೆ ಯೋಗ್ಯ ಪ್ರಜೆಗಳಾಗಿ ಬೆಳೆಯಲು ಅನುಕೂಲವಾಗುವಂತೆ ಅವರಿಗೆ ಎಲ್ಲಾ ವ್ಯವಸ್ಥೆಯನ್ನು ಈ ಸಮಾಜದಲ್ಲಿ ನೀಡುವ ಉದ್ದೇಶವನ್ನು ಇಟ್ಟುಕೊಂಡು ಇದರ ಜೊತೆಗೆ ಉದ್ಯೋಗಸ್ಥ ಮಹಿಳೆಯರಿಗೋಸ್ಕರ ಒಂದು ವಸತಿ ಗೃಹವನ್ನು ನಿರ್ಮಿಸಿ ಹಾಗೂ ನಮ್ಮ ಸಮಾಜದ ಇತರ ಪೂರಕ ಚಟುವಟಿಕೆಗಳನ್ನು ಕೈಗೊಂಡು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಇದಕ್ಕೆ ಪೂರಕವಾಗಿ ಈ ಕೆಳಗಿನ ಸಹಸಂಸ್ಥೆಗಳನ್ನು ನಾವು ನಡೆಸುತ್ತಾ ಬರುತ್ತಿದ್ದಾರೆ .

1. ಸ್ವಾಮಿ ವಿವೇಕಾನಂದ ಗ್ರಂಥಾಲಯ:
2. ಮಾ ಶಾರದಾಮಣಿ ಅನಾಥಾಲಯ :
3. ಮಂಜಕ್ಕ ನಿರ್ಗತಿಕ ಕುಠೀರ:
4. ಕಸ್ತೂರ್ಬಾ ಉದ್ಯೋಗಸ್ಥ ಮಹಿಳೆಯರ ವಸತಿಗೃಹ:

ಪುತ್ತೂರಿನ ಏಳಿಗೆಯಲ್ಲಿ ಪರವೂರಿನ ಗಣ್ಯರ ಪಾತ್ರ ಬಹಳ ಹಿರಿದು .ಮೊಳ ಹಳ್ಳಿ ಶಿವ ರಾವ್ , ಶಿವರಾಮ ಕಾರಂತ ,ಮಾಯಿರ್ಪಳ್ಳಿ ಸದಾಶಿವ ರಾವು ,ಮಾಯಿರ್ಪಳ್ಳಿ ಸುಂದರ ರಾವ್ ,ಬೈಂದೂರು ಪ್ರಭಾಕರ ರಾವ್ ಹೀಗೇ ಪಟ್ಟಿ ಮಾಡುತ್ತಲೇ ಹೋಗ ಬಹುದು .

 ಕೃಶ ಕಾಯರಾದಸದಾಶಿವ ರಾಯರು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಟ್ರೇಡ್ ಮಾರ್ಕ್ ಖಾದಿ ಶರಟು ಮತ್ತು ಧೋತಿ ಉಡುಗೆಯಲ್ಲಿ ಮನೆಯಿಂದ ಆಶ್ರಮ ಕ್ಕೆ ನಡೆದು ಹೋಗುವುದನ್ನು  ದಶಕಗಳ ಹಿಂದೆ ನೋಡಿದ್ದೆ . ಮೇಲೆ ಉಲ್ಲೇಖಿಸಿದವರು ಪುತ್ತೂರಿನ ಪುಣ್ಯ ಪುರುಷರು .

ಹಿರಿಯರಾದ ಶ್ರೀ ಚೆಟ್ಟಿಯಾರ್ ,ಕೇಶವ ಭಟ್ ,ವಿದುಷಿ ನಯನ ರೈ ಶ್ರೀಮತಿ ಶಂಕರಿ ಶರ್ಮ ಇಲ್ಲಿ ಮಕ್ಕಳಿಗೆ ವಿದ್ಯಾದಾನ ಕೈಂಕರ್ಯ ಮಾಡುತ್ತಿದ್ದಾರೆ. ಇನ್ನೂ ಹಲವರ ಹೆಸರು ಉಲ್ಲೇಖವಾಯಿತು .

ವಿವೇಕಾನಂದ ರಾಮಕೃಷ್ಣ ರ ಆದರ್ಶದಲ್ಲಿ ಹುಟ್ಟಿದ ಸಂಸ್ಥೆ .ವಿವೇಕಾನಂದ ಅವರು ದರಿದ್ರ ದೇವೋ ಭವ (ಬಡವರಲ್ಲಿ ದೇವರ ಕಾಣು )ಎಂದು ಸಾರಿದವರು .ಇಲ್ಲಿ ನಡೆಯುತ್ತಿರುವುದು ಪ್ರತಿಫಲ ಮತ್ತು ಪ್ರಚಾರ  ಅಪೇಕ್ಷೆ ಇಲ್ಲದ ದೇವಕಾರ್ಯ ಎಂದು ಕೊಂಡೆನು.ವಾರ್ಷಿಕೋತ್ಸವದಲ್ಲಿ ಪುಟಾಣಿಗಳ ಹಾಡು ಕುಣಿತ ,ನಟನೆ ನೋಡಿ ಮನಸು ಮುದವಾಯಿತು . ದೊಡ್ಡ ಕೂಡು ಕುಟುಂಬದ ಸಂತೋಷವನ್ನು ಅವರು ಅನುಭವಿಸುತ್ತಿರುವಂತೆ ಕಂಡು ಬಂತು .



ಶುಕ್ರವಾರ, ಡಿಸೆಂಬರ್ 22, 2023

ಒಂದು ಸೂಕ್ಷ್ಮ ವಿಚಾರ

 ದಶಕಗಳ ಹಿಂದೆ ನಡೆದ ಘಟನೆ . ಒಂದು ಬಡ ಕುಟುಂಬ .ಅಲ್ಲಿ ಒಬ್ಬಳು ಹೆಣ್ಣು ಮಗಳು .ಆಕೆ ನನ್ನ ಪೇಷಂಟ್ . ಕಾಯಿಲೆ ಅಸ್ತಮಾ . ಚಳಿಗಾಲದಲ್ಲಿ ಜಾಸ್ತಿ . ಔಷದೋಪಚಾರ ಗಳಿಂದ ಹತೋಟಿಯಲ್ಲಿ ಇತ್ತು . ತಂದೆ ತಾಯಿ ಹುಡುಗನನ್ನು ನೋಡಿ ,ಶಕ್ತಿ ಮೀರಿ ಖರ್ಚು ಮಾಡಿ ಮದುವೆ ಮಾಡಿ ಕೊಟ್ಟರು . ಪತಿ ಗೃಹದಲ್ಲಿ  ಇವಳಿಗೆ ಆಸ್ತಮಾ ಕಾಯಿಲೆ ಇರುವುದು ಕಂಡು ಗಂಡನೂ ಸೇರಿ ಎಲ್ಲರೂ ಸಿಟ್ಟಿಗೆದ್ದರು . ಶುರುವಾಯಿತು ಕಾಟ ,ರೋಗವನ್ನು ಮುಚ್ಚಿ ಬಿಟ್ಟು ಮದುವೆ ಮಾಡಿದ್ದಾರೆ . ಹೇಗೆ ಇವಳನ್ನು ಓಡಿಸುವುದು ?ಕೂತಲ್ಲಿ ನಿಂತಲ್ಲಿ ಸಹಸ್ರ ನಾಮ .ಹೊಗೆ ಒಲೆಯ ಬುಡದ ಕೆಲಸ ಇವಳೇ ಮಾಡುವಂತೆ ತಾಕೀತು ..ತಣ್ಣಿರಿನಲ್ಲಿಯೇ ಸ್ನಾನ ಮಾಡ ಬೇಕು ಇತ್ಯಾದಿ .ಬದುಕು ಅಸಹನೀಯ ಆದಾಗ ತವರು ಮನೆಗೆ ಓಡಿ ಬಂದಳು . ವರ್ಷಗಳ ನಂತರ ಒಂದು ದಿನ ಎಲ್ಲೋ ಪ್ರಯಾಣ ಮಾಡುತ್ತಿರುವಾಗ ಬಸ್ಸಿನಲ್ಲಿ ಸಿಕ್ಕಿದಳು . ಬೇರೊಂದು ಹುಡುಗನ ಜತೆ ಮದುವೆ ಆಗಿತ್ತು . ನಡುವಿನ ಮತ್ತು ನಂತರದ ಕತೆ ನನಗೆ ತಿಳಿದಿಲ್ಲ . ಸಂತೋಷವಾಗಿ ಇರಲಿ ಎಂಬ ಹಾರೈಕೆ ಮಾತ್ರ . 

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದೆ . ಇದರಲ್ಲಿ ಸುಳ್ಳು ಹೇಳದಿದ್ದರೂ ಸತ್ಯವನ್ನು ಬಚ್ಚಿಡುವುದು  ಕೂಡಾ ಸೇರಿದೆ . ವಿವಾಹ ಬಂಧ ಮಾತುಕತೆ ಆಗುವಾಗ ಏನೆಲ್ಲಾ ಹೇಳ ಬೇಕು ?ಏನೆಲ್ಲಾ ಬಾರದು ?ಇದು ದೊಡ್ಡ ಪ್ರಶ್ನೆ . ಮೇಲೆ ಉಲ್ಲೇಖಿಸಿದ ಆಸ್ತಮಾ ಕಾಯಿಲೆ ದೊಡ್ಡ ದೇನೂ ಅಲ್ಲ .ಅದಕ್ಕೆ ಒಳ್ಳೆಯ ಔಷಧಿ ಕೂಡಾ ಇದೆ . ಅಪಸ್ಮಾರ ,ಸಕ್ಕರೆ ಕಾಯಿಲೆ ,ಮಾನಸಿಕ ಕಾಯಿಲೆ , ಮದ್ಯ ಇತ್ಯಾದಿ  ವ್ಯಸನ  ಇದ್ದರೆ ಮೊದಲೇ ಹೇಳ ಬೇಕೆ ?ಈ ವಿಚಾರ ಮುಚ್ಚಿಟ್ಟು ಅನೇಕ ಮದುವೆಗಳು ಮುರಿದಿವೆ .ವಿವಾಹ ಮೊದಲೇ ಇದ್ದ ಪ್ರೇಮ ಸಂಬಂಧ ಗಳನ್ನೂ ಸೇರಿಸ ಬಹುದು . ಈಗಂತೂ ಎಲ್ಲಾ ಸರಿ ಇದ್ದು ಆದ ವಿವಾಹ ಬಂಧಗಳೆ ಮುರಿದು ಬೀಳುತ್ತಿವೆ ,.

ಈಗ ನನ್ನ ಸಮಸ್ಯೆಗೆ ಬರೋಣ . ಮೊನ್ನೆ ಒಬ್ಬರು ಬಂದಿದ್ದರು.ಅವರ ಕುಟುಂಬ ನನ್ನ ಬಳಿಗೆ ವೈದ್ಯಕೀಯ ಸಲಹೆ ಗೆ ನನ್ನ ಬಳಿಗೆ ಬರುವುದು . ಅವರು ಒಬ್ಬ ಹುಡುಗನ (ಸ್ಥಿತಿ ವಂತನೆ )ಬಗ್ಗೆ ವಿಚಾರಿಸಿ ಅವನಿಗೆ ಆರೋಗ್ಯ ಸಮಸ್ಯೆ ಇದೆಯೇ ? ಪೊದು ಮಾತನಾಡಿಸ ಬಹುದೇ ?ಎಂದು ವಿಚಾರಿಸಿದರು .ಅವನ ಬಗ್ಗೆಯೂ ನನಗೆ ಮಾಹಿತಿ ಇದೆ .ಆದರೆ ವೈದ್ಯಕೀಯ ವೃತ್ತಿಯಲ್ಲಿ ನಾವು ಇದನ್ನು ಅನ್ಯರ ಬಳಿ ಹೇಳ ಬಾರದು.ಅದು ಗಂಭೀರ ಕಾಯಿಲೆ ಅಲ್ಲದಿದ್ದರೂ  . ಆಸ್ಪತ್ರೆಯಲ್ಲಿ ನನ್ನ ಅರಿವಿಗೆ ಬಂದ ನಮ್ಮ ಸಂಬಂದಿಕರ ಅನಾರೋಗ್ಯ ಬಗ್ಗೆ  ಕೂಡಾ ನಾನು ಮನೆಯಲ್ಲಿ ಕೂಡಾ ಪ್ರಸ್ತಾಪ ಮಾಡುವುದಿಲ್ಲ . 

    ಅರೋಗ್ಯ ವಿಮೆ ಮಾಡುವಾಗ ಇದ್ದ ಕಾಯಿಲೆಗಳನ್ನು ಘೋಷಿಸ ಬೇಕು ಎಂಬ ಷರತ್ತು ಇರುವುದು  ಮತ್ತು  ಒಂದು ಅವಧಿಯ ವರೆಗೆ ಆ ಕಾಯಿಲೆಗಳು ವಿಮಾತೀತ ಆಗಿರುತ್ತವೆ . ಅದೇ ರೀತಿ ಮದುವೆ ಸಂಬಂಧ ಏರ್ಪಡಿಸುವಾಗ ಉಭಯ ತರರೂ ಗಂಭೀರ ಅರೋಗ್ಯ ಸಮಸ್ಯೆ ಇದ್ದರೆ ಹೇಳಿ ಕೊಳ್ಳುವುದು ಉತ್ತಮ . ಇದರಲ್ಲಿ ವಂಶ ಪಾರಂಪರ್ಯ ಕಾಯಿಲೆಗಳನ್ನೂ ಸೇರಿಸ ಬಹುದು .

ಇಷ್ಟೆಲ್ಲಾ ಇದ್ದರೂ ಮದುವೆ ಪಶ್ಚಾತ್  ಮೊದಲೇ ಇದ್ದ ಕಾಯಿಲೆ ಬಗ್ಗೆ ತಿಳಿದು ಬಂದರೂ ,ಅನ್ಯೋನ್ಯವಾಗಿ ಇರುವ ದಂಪತಿ ಗಳನ್ನೂ ಕಂಡಿದ್ದೇನೆ